ಮುದ್ದು ಮನಸ್ಸು

ಏಳ್ಳಂತಿದ್ದ ಮನ್ಸೊಳ್ಗೆ 

ಎಣ್ಣೆ ಹಂಗೆ ಬೆರತೋದೆ      

ಯಾವಾಗ್ಲೋ ನಾ ಕಾಣೆ ಹುಡುಗ
ಬೇರೆ ಬೇರೆ ಆಗದಂಗೆ

ಎರಡೂ ಮನ್ಸು ಬೆರೆತೋಯ್ತು

ಕೇಳೋ ಮುದ್ದು ಹುಡುಗ
ಕಾದು ಕುಂತೈತಿ ಮನಸು

ಪಿರಿತಿ ಮಾತ್ ಕ್ಯಾಳಬೇಕಂತ

ಯಾವಾಗ ಮುದ್ದ್ಮಾಡಿ ಏಳ್ತೀ ನನ್ಹುಡುಗಾ
ಎಳ್ಳಿನ ಜ್ವಾತಿ ಬೆಲ್ಲಾನು 

ಸೇರೈತಿ ಬಾಳಿನ್ಯಾಗ ಅಂತಾರು 

ಬಿರ್ರನೆ ಬಾರೋ ನನ್ನ ಮುದ್ದು ಹುಡುಗ
ಕಣ್ಣಿಗೆ ಎಣ್ಣೆ ಬಿಟ್ಕಂಡು

ಹಗಲು ರಾತ್ರಿ ಕಾಯ್ಕೋಂಡು

ಕಾದು ಕುಂತೀವ್ನಿ ನಿನ್ನ  ದಾರಿ ಕೇಳೊ ಹುಡುಗ
ಬಿರ್ರನೆ ಬಂದ್ಹೇಳು ಮುಪ್ಪಾದ್ರು 

ಜಪ್ಪಿಲೆ ಜ್ವಾಕಿ ಮಾಡೇನು ನಿನ್ನಂತ

ತ್ಯಪ್ಪದ ಸಂಕ್ರಾತಿಗೆ ಕೊಟ್ಟೇನು ಮುದ್ದಾದ 

 ಮಗಿನ್ನ ಕೇಳೊ ನನ್ನ ಹುಡುಗ …!!!
ಮಾನಸಾ ಎಪಿ

Advertisements

ಲವ್ ಯು ಮುದ್ದು

ಅವತ್ತು ಒಂದು ಮಾತು ಕೇಳಿದೆ ನನಗೆ ನೀನು,ನನ್ನ ಬಗ್ಗೆ ಏನು ಅರ್ಥ ಮಾಡಿಕೊಂಡಿದೀರಾ ???ನೀವು ಅಂತ..

ಏನು ಉತ್ತರ ಹೇಳಲಿ ನಿನಗೆ ..

ನಾನೇ ನೀನಾದಾಗ ಅರ್ಥ ಹೇಗೆ ಹೇಳಲಿ .ಆದರೂ ನಿನ್ನ ಬಗ್ಗೆ ಹೇಳುವ ಆಸೆ 

 ನಾನಂತೂ ನಿನ್ನ ಮೇಲೆ ಯಾಕೆ ಇಷ್ಟೊಂದು ಡಿಪೆಂಡ ಆಗಿದೇನಿ ಅಂತ ನನಗೂ ತಿಳಿಯುತ್ತಿಲ್ಲ,ಕಾರಣ ಹುಡುಕ ಹೊರಟರೇ ಅದು ಬರೀ ಶೂನ್ಯ .

ಮಾತು ಕತೆ ಸ್ನೇಹ ಪ್ರೀತಿ ಯಾವಾಗಲೂ ಇರಬೇಕು ನಿನ್ನ ಜೊತೆ ಮಾತಾಡುತಾ ಇರಬೇಕು ಅನ್ನೋ ಆಸೆ. ಅಂತಹ ಆಸೆಗೆ ಕಡಿವಾಣ ಹಾಕಲೂ ಸಾಧ್ಯ ಇಲ್ಲ ಯಾಕೆಂದರೆ ಸ್ನೇಹದ ಕಡಲಲಿ ಸಾಗುವ ಪಯಣಿಗಳು ನಾನು. ಸ್ನೇಹ ಮತ್ತು ಸ್ನೇಹಿತರಿಗೆ ಮನದಲ್ಲಿ ಒಂದು ಸ್ಥಾನ ಕಾಯ್ದಿರಿಸಿದವಳು ನಾನು 

ಸ್ನೇಹ ಅಂತ ಆದರೆ ಒಂದು ಕೊನೆ ಅಂತ್ಯ ಇರುತ್ತದೆ ಆದರೆ ನಮ್ಮ ಸ್ನೇಹ ಅದಕ್ಕೂ ಮೀರಿದ್ದು ಅಂದರೆ ತಪ್ಪಾಗಲಾರದು ಜೀವನದಲ್ಲಿ ಎಲ್ಲ ಮುಗಿದು ಹೋಯಿತು ಎನ್ನುವಷ್ಟರಲ್ಲಿ,ಎಲ್ಲಿಂದಲೋ ಮತ್ತೆ ಹೊಸ ಕನಸೊಂದು ಚಿಗುರೊಡೆದಿತ್ತು ಜೀವನವನ್ನು ಹೇಗಾದರೂ ಕಳೆಯಬಹುದು ಅಂದುಕೊಂಡವಳಿಗೆ ಆದರ ಜೊತೆಗೆ ಹೀಗೂ ಸಂತಸವನ್ನು ಅನುಭವಿಸಬಹುದು ಎಂದು ಅರಿವು ಮೂಡಿಸಿದವನು ನೀನು,ಮನದ ಮೂಲೆಯಲ್ಲಿ ಇದ್ದ ಅಸಹಾಯಕತೆ ನಿರಾಸೆ ದೂರಮಾಡಿದವನು ನೀನು.ಗೆಲುವಿನ ಹಾದಿಗೆ ಸೋಲು ಅಡ್ಡ ಬರದಂತೆ ಮಾರ್ಗದರ್ಶನ ಕೊಡುವವನು ನೀನು.ಜೀವನದಲ್ಲಿ ಸಾಧಿಸಬೇಕಾಗಿದ್ದು ಇನ್ನೂ ಇದೆ ಎನ್ನುವ ಅರಿವು ಮೂಡಿಸಿದವನು  ನೀನು.
ನಿನ್ನ ಹೊರತಾಗಿ ಮತ್ತೇನನು ಬಯಸದು ಮನ ನಿನ್ನ ಜೊತೆ ಹೀಗೆ ಇದ್ದು ಬಿಡೋಣ ಅಂತ  ಅನ್ನಿಸಿದರೂ ಮನಸಲ್ಲಿದ್ದ ಸುಂದರ ಭಾವನೆಯೊಂದಿಗೆ  ಒಂದಾಗಿ ಬಾಳುವ ಅವಕಾಶ ಆ ದೇವರು ನಮ್ಮಿಬ್ಬರಿಗೂ ಕೊಟ್ಟಿಲ್ಲ ಆದರೂ ಈ ಮುಗ್ದ ಮನವು ನೀ ಕೊಟ್ಟ ಪ್ರೀತಿಯನ್ನು ಏಳೇಳು ಜನುಮದಲಿ ಸದಾ ಹೀಗೆ ಜೊತೆಯಾಗಿ ಇರಲಿ  ಎಂದು ಬೇಡುತ್ತಿದೆ ಕಣೋ 
ಎಷ್ಟೋ ಸಾರೆ ಯಾರೂ ಇಲ್ಲದ ಜಾಗಕ್ಕೆ ಹೋಗಿ ಜೋರಾಗಿ ನಿನ್ನ ಹೆಸರನ್ನೊಮ್ಮೆ ಕೂಗಿ ಬಿಡಲೆ ಅಂತ ಅನಿಸುತ್ತದೆ..ಕೆಲವೊಂದು ಸಾರೆ ಜೋರಾಗಿ I love you ಹೇಳಿ ಬಿಡಲೇ ಅಂತ ಅನಿಸುತ್ತದೆ ಎಂತಹ ಹುಚ್ಚು ಮನಸ್ಸು ಅಲ್ಲವಾ ನನ್ನದು ..ಆದರೆ ಧೈರ್ಯ ಸಾಲದು ಮನದಲ್ಲಿ ನನ್ನ ಹೃದಯದ ಬಡಿತ ಕಡಿಮೆ ಇರಬಹುದು ಆದರೆ ಮನಸ್ಸಲ್ಲಿ ನಾನು ಹೇಳುವ ನಿನ್ನೇ ಪ್ರೀತಿಸುತ್ತೇನೆ ಕಣೋ ಅನ್ನುವದು ಹೃದಯದ ಬಡಿತದ ವೇಗಕ್ಕಿಂತೂ ಹೆಚ್ಚು…ಅದು ನೀನು ಅರೆತರೆ ಸಾಕು ಕಣೋ ಮುದ್ದು
ಹಾಗಂತ ನನ್ನೇ ಪ್ರೀತಿಸು ಎನ್ನುವದಿಲ್ಲ ಒತ್ತಾಯ ಕೂಡ ಮಾಡುವದಿಲ್ಲ ಕಾರಣ ಇಷ್ಟೇ ಪ್ರೀತಿ ಪ್ರೇಮ ಪ್ರಣಯ ಇವಕ್ಕೆಲ್ಲ ಅದರದೇ ಆದ ವಯಸ್ಸಿನ ಮಿತಿ ಇದೆ, ಅದೆಲ್ಲವ ಮೀರಿ ನಾನು ನಿನ್ನೊಳಗೆ ಒಂದಾಗಿದ್ದು ತಪ್ಪೇ ಹಾಗಂತ ಆ ಮಧುರ ಪ್ರೀತಿಯ ಮರೆಯಲು ಸಾಧ್ಯವಿಲ್ಲ.
 ನನಗೆ ನನ್ನದೇ ಆದ ಜವಾಬ್ದಾರಿಗಳು ಬೆಟ್ಟದಷ್ಟು ಕಣ್ಮುಂದೆ ಕಾಣುತ್ತಿವೆ ಅದನ್ನೂ ಮೀರಿ ನಿನಗೆ ನನ್ನ ಪ್ರೀತಿಯಲಿ ಪಾಲುದಾರನಾಗಿಸಿದೆ .ನಿನ್ನ ಹೆಸರಿನ ಪ್ರೀತಿಯ ಗುಡಿಯನ್ನೆ ಮನದಲ್ಲಿ ಕಟ್ಟಿದೆ ,ಆದರೂ ನಿನಗೆ ನನ್ನ ಮೇಲೆ ಮುನಿಸು ಚಿಕ್ಕಪುಟ್ಟ ವಿಷಯಕ್ಕೆ ಬೇಜಾರು ಮಾಡಿಕೊಂಡರೆ ಬೇರೆಲ್ಲ ಪ್ರೇಮಿಗಳ ಹಾಗೆ ನೀನು ಕೂಡಾ ಹೊರತಾಗಿಲ್ಲ ಅನಿಸುತ್ತದೆ.ಹೀಗಾದರೆ ಪ್ರೀತಿಗೆ ಅರ್ಥ ಇರಲ್ಲ ಕಣೋ ಮುದ್ದು . ನಾನು ನಿನ್ನೊಂದಿಗೆ ಬಾಳಲು ಆಗದೇ ಇರಬಹುದು ಆದರೆ ದೂರ ಇದ್ದು ಪ್ರೀತಿಸುವದನ್ನು ಕಲಿಸಿ ಕೊಟ್ಟ ಮನಕೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆನೆ. ಬರುಡಾದ ಬದುಕಲಿ ನೀನು ಆಗಮಿಸಿ ನೀ ಸುರಿಸಿದ ಪ್ರೀತಿಯ ಸೋನೆ ಮಳೆಗೆ ಮತ್ತೆ ನವಪಲ್ಲವದಿ ಕಂಗೋಳಿಸುತಿದೆ ಈ ಜೀವನ ….

*ಪ್ರೀತಿಗೆ ಎಲ್ಲಿಯೂ ಯಾವ ಶಾಸ್ತ್ರಜ್ಞನೂ ವ್ಯಾಖ್ಯಾನ ಕೊಡಲಾರನು…ಬದುಕಿನಲ್ಲಿ ಅನುಭವಿಸಿ ಗಳಿಸಿಕೊಂಡಿದ್ದೇ ನಿಜವಾದ ಪ್ರೀತಿ  ಅದರ ಸವಿನೆನಪುಗಳು ಜೀವನದ ಅಂತ್ಯ ಕಾಲದವರೆಗೂ ಅಳಿಯದೆ ಹಸಿರಾಗಿ ಉಳಿದಿರುತ್ತದೆ…ಅವರವರ ಭಾವನೆಗಳಿಗೆ ನಿಲುಕಿದ್ದೆ ಅದು ಮುಗ್ಧ ಮನದ ಮಧುರ ಪ್ರೀತಿ*
ಲವ್ ಯು ಮುದ್ದು….!!!

ಮಾನಸಾ ಎಪಿ

ಐನಾಪುರ

ಯಾನ

ಕತ್ತಲಲ್ಲಿ ಕಳೆದು ಹೋದೆ

ಮಿಂಚು ಬೆಳಕಿಗಾಗಿ ಹಂಬಲಿಸುತ್ತ

ಸಂಜೀವಿನಿಯ ಆಸೆ ಹೊತ್ತು

ದೂರ ತೀರವ ಸೇರಲು ತವಕಿಸುತ್ತ
ಕುರುಡು ಕನಸುಗಳ ಬೆನ್ನಹತ್ತಿ

ಆಸೆಗಳೆಲ್ಲ ನಿರಾಸೆಗಳಾಗಿ ಎದೆಬಿರಿದವು

ಕನಸುಗಳೆಲ್ಲ ಕಳಚಿ ಬಿದ್ದು

ಬಿರುಗಾಳಿಗೆ ಸಿಲುಕಿ ಹಾರಾಡುತಿಹವು
ನೋವಿನ ಮಂಥನದಲಿ ದಿನಕಳೆದೆ

ನಲಿವಿಗಿಲ್ಲಿ ಜಾಗವಿರದೆ ನರಳಿದೆ

ಪ್ರೀತಿಗಾಗಿ ಹಂಬಲಿಸಿದೆ ಹಗಲಿರುಳು

ನಿರಾಸೆಯಿಂದ ತಪಿಸಿದೆ ಮನದಕೊರಳು
ಕಾಣದ ಕಡಲೊಳಗೆ ಹಂಬಲಿಸಿ

ಸ್ವಾತಿ ಮುತ್ತನು ಹುಡುಕಾಡಿದೆ

ಸೇರಲಾಗದು ದೂರ ತೀರದ ಯಾನ

ಸ್ಮಶಾನದೆಡೆ ಮೌನದ ಪಯಣ
ಮಾನಸಾ ಎಪಿ

ಮುದ್ದು ಮನಸ್ಸು

ಕವಿಯಾಗಬಲ್ಲೆ ನೀ ಜೊತೆಯಿರುವಾಗ

ಕವಿತೆಯಾಗಬಲ್ಲೆ ನೀ ಹಾಡುವಾಗ

‌ನವಿಲಾಗಿ ನರ್ತಿಸಿ ಕಣ್ ತಣಿಸಬಲ್ಲೆ 

ನೀ ಮೋಡವಾದಾಗ

ಮಳೆಬಿಲ್ಲಾಗಿ ಮನತಣಿಸವಲ್ಲೆ

ನೀ ಮಳೆಸುರಿಸುವಾಗ

ಅರಳಿ ಪರಿಮಳ ಬೀರುವ ಸುಮ

ನಾನಾಗಬಲ್ಲೆ 

ನೀ ಭಾಸ್ಕರನಾದಾಗ

ಪೀಳಂಕಿಗಳ ಸುಮಧುರ ಇಂಚರವಾಗಬಲ್ಲೆ

ಸಂಬಾಷಣೆ ನೀ ಕೊಡುವಾಗ

ಎಲ್ಲೆಲ್ಲೂ ನೀನಿರುವಾಗ 

ನನ್ನೊಲವೆ ನೀನಾದಾಗ 

ಬೇರೆನು ಬೇಡವೋ ನನಗೆ 

ಓ ಮುದ್ದು ಮನಸ್ಸೆ…!!!
*ಮಾನಸಾ ಎಪಿ*

ಮೊದಲ ಮಳೆಯಂತೆ

  ಆಕಸ್ಮಿಕವಾಗಿ ಆದ ನಮ್ಮಿಬ್ಬರ ಪರಿಚಯ ಪ್ರೇಮದ ಉತ್ತಂಗದ ಶಿಖರವನ್ನೇ ಏರಿದೆ,ನನ್ನೆದೆಯ ವೀಣೆಗೆ ತಂತಿಯ ಬೆಸೆದವನು ನೀನೆ,ಅದರಲಿ ಹೊಮ್ಮಿದ ಮಧುರ ರಾಗಕೆ ಸಂಗೀತವಾದವನು ನೀನೆ.ನಿನ್ನ ಒಂದೊಂದು ಮಾತುಗಳನ್ನು ಮತ್ತಷ್ಟು ಕೇಳುವ ಹಂಬಲ,ನಿನ್ನ ಹುಚ್ಚು ಪ್ರೀತಿಯ  ಹೊಳೆಯಲ್ಲಿ ಅರಿಯದೆ ತೇಲುತ್ತಿದೆ ಮನಸ್ಸು ,ನಿನ್ನ ಹೃದಯ ಸ್ಪರ್ಶಿ ಮಾತುಗಳು ನನ್ನನ್ನು ನಿನ್ನ ಹತ್ತಿರ ಸೆಳೆಯುವಂತೆ ಮಾಡುತ್ತಿದೆ.ಅದೆಷ್ಟೇ ನೋವುಗಳಿದ್ದರೂ ನಿನ್ನ ಮಾತಿನ ಮೋಡಿಯಲಿ ಮರೆಯುವಂತೆ ಮಾಡುತ್ತದೆ.ಮಾತುಗಳ ಮಧ್ಯ ನೀನು “ಚಿನ್ನ” ಎಂದು ಕರೆಯುವ ಎರಡಕ್ಷರದಲಿ ಹಿಮದಂತೆ ಹೆಪ್ಪುಗಟ್ಟಿದ ನೋವೆಲ್ಲಾ ಕರಗಿ ನೀರಾಗಿಸಿ ಹೋದ ಅನುಭವ,ಈಗಲೂ ನಿನ್ನ ಪ್ರೀತಿಯ ಮಾತುಗಳೆ ನನಗೆ ಬಲ.ನಿನ್ನದೊಂದು ಮಧುರ ಮಾತಿಗೆ  ಹಂಬಲಿಸಿ ಕಾದಿದೆ ಮನ.
ಆಗೆಲ್ಲ ಟಿವಿ ಲಿ ಆಗೊಮ್ಮೆ ಈಗೊಮ್ಮೆ ಬರುವ 
“ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ…”ಈ ಹಾಡು ಮನಸ್ಸಿಗೆ ಮುದ ನೀಡಿ ಖಷಿಯಿಂದ ಗುಣಗಿಸುವಂತೆ ಮಾಡುತ್ತದೆ.
   ನೀನೊಂದು ಸರಕಾರಿ ಕೆಲಸದಲ್ಲಿ ಇದ್ದರೂ ನಿನ್ನ ಬಿಡುವಿಲ್ಲದ ಹಲವಾರು ಕೆಲಸಗಳ ಮಧ್ಯಯೂ ನನಗಾಗಿ ನೀನು ಕಾಯುವ ಪರಿ ಇದೆಯಲ್ಲ,ನನ್ನನ್ನು ನಿನ್ನ ಪ್ರೀತಿಗೆ ಬೀಳಿಸದೇ ಇರಲಿಲ್ಲ .ನಿನ್ನ ಕೆಲಸದ ಒತ್ತಡದ ನಡುವೆ ನನಗೇ ಅಂತ ಸಮಯ ಮೀಸಲಿರಿಸಿದ್ದು ಹೆಮ್ಮೆಯ ವಿಷಯ ಇನ್ನೂ ನಿನ್ನ ಮೇಲೆ ಗಾಡವಾದ ಪ್ರೀತಿ ಮೂಡುವಂತೆ ಮಾಡಿತ್ತು.ಅನಿವಾರ್ಯ ಕಾರಣದಿಂದ ನೀನ್ನ ಮೆಸೇಜ್ ಬರದೆ ಇದ್ದರೆ,ಕಾಲ್ ಬರದಿದ್ದರೂ ನಾನು ಸಹನೆ ಕಳೆದು ಕೊಳ್ಳುತ್ತಿದ್ದೆ ಪದೆ ಪದೇ ಮೊಬೈಲ್‌ ನೋಡುವದು ನೆಟ್ವರ್ಕ್‌ ಗೆ ಶಾಪ ಹಾಕದೆ ಇರುತ್ತಿರಲಿಲ್ಲ, ನಿನ್ನ ಮೆಸೇಜ್ ಬಾರದಿದ್ದಾಗ ಎಷ್ಟೋ ಸಾರೆ ಜಗಳ ಮಾಡಿದ್ದು ಉಂಟು ,ಆದರೆ ನಿನ್ನ ಸಹನೆ ,ಮುದ್ದು ಮಾತುಗಳಿಗೆ ನನ್ನ ಕೋಪ ಕಡಿಮೆ ಮಾಡುವ ಶಕ್ತಿ ಆ ದೇವರು ಅದೆಲ್ಲಿಂದ ಕೊಟ್ಟಿದ್ದನೋ ನಾನರಿಯೆ,ನನ್ನ ಕೋಪ ಕಡಿಮೆ ಆದಾಗ ನೀನು ರಮಿಸಿ ಮುದ್ದಿಸಿ ಹೇಳಿದ ಮಾತು ನೆನಪಿಗೆ ಬರುತ್ತಿತ್ತು. “ಎಲ್ಲಿ ಪ್ರೀತಿ ಜಾಸ್ತಿ ಇರುತ್ತೋ ಅಲ್ಲಿ ಜಗಳ ಜಾಸ್ತಿ” ಅಂತ.
ನಿನಗೆ ನನ್ನ ಬಗ್ಗೆ ಅದೆಷ್ಟು ಕಾಳಜಿ,ನನ್ನ ಮಾತಿನ ಏರಿಳಿತಗಳನ್ನು ಗಮನಿಸಿ ನನ್ನ ಮನದ ಪರಿಸ್ಥಿತಿಯನ್ನು ವಿಚಾರಿಸುತ್ತಿಯಲ್ಲ ಆಗ ಹೃದಯದಲ್ಲಿ ಮತ್ತೆ ಒಲವಿನ ಗರಿ ಬಿಚ್ಚಿ ಕುಣಿಯುವಂತೆ ಮಾಡುತ್ತದೆ .ಮಾತಿನಲ್ಲಿ ಸ್ವಲ್ಪವೇ ಬದಲಾದರೂ ನೀನು ಕಾಲ್ ಮಾಡಿ ವಿಚಾರಿಸಿ ಅದಕ್ಕೆ ಸರಿಯಾದ ಪರಿಹಾರ ಕೊಡುತ್ತಿರುವದನ್ನು ನೋಡಿದರೆ ನಮ್ಮಿಬ್ಬರದು ಎಷ್ಟೋ ವರುಷಗಳ ಸಂಬಂದ ಇದು ಅನ್ನಿಸದೇ ಇರಲಾರದು .ನೀ ತೋರಿಸುವ ಕಾಳಜಿ ಪ್ರೀತಿಗೆ ನನ್ನ ಮನದ ದುಗುಡವೆಲ್ಲ  ಮರೆಯಾಗಿ ಭಾರವಾದ ಹೃದಯ  ಹಗುರವಾಗಿ ಹಕ್ಕಿಯಾಗಿ ನೀಲಾಕಾಶದಲ್ಲಿ ತೇಲಿಹೋದ ಅನುಭವ ಕಣೋ ಮುದ್ದು..
  ನಾವಿಬ್ಬರು ಒಂದಾಗೋ ಸ್ಥಿತಿಲಿ ಇಲ್ಲ ಆದರೂ ಅದೆಷ್ಟೋ ಅದು ಎಲ್ಲೆ ಮೀರಿದ ಪ್ರೀತಿ ,ಎದೆಯಲ್ಲಿ ಸತತ ಮಿಡಿತ ಪ್ರತಿದಿನವೂ ಹುಣ್ಣಿಮೆಯ ಕಡಲಂತೆ ಭೋರ್ಗರೆವ ಪ್ರೇಮದ ಸೆಳೆತ ನಮ್ಮ ಹೃದಯ ತೀರಗಳ ಸಮಾಗಮ ಎದೆಯಲ್ಲಿ ನಮ್ಮದೇ ಪುಟ್ಟ ಗೂಡೊಂದನ್ನು ಕಟ್ಟಿಕೊಂಡು ಸಂತಸದ ಬನದಲ್ಲಿ ವಿಹರಿಸುತ್ತಿದ್ದುದು ಅಷ್ಟೇ ಸತ್ಯ.ಯಾವಾಗಲೂ ನಿರ್ಮಲ ಪ್ರೀತಿಗೆ ಆಸೆ  ಪಟ್ಟವಳು ನಾನು ,ತಿಳಿದೋ ತಿಳಿಯದೆಯೋ ನಿನ್ನ ಪ್ರೀತಿಯ ಬಲೆಯಲ್ಲಿ ಬಂಧಿಯಾಗಿದ್ದೇನೆ ,ನಿನ್ನ ಮುಂದೆ ಜಗತ್ತಿನಲ್ಲಿರುವ ಎಲ್ಲವೂ ಗೌಣ.ನೀನಿಲ್ಲದೇ ಬದುಕು ಶೂನ್ಯ ಅನ್ನಿಸಿದರೂ ನಾವಿಬ್ಬರು ದೂರ ಇರುವುದು ಅನಿವಾರ್ಯವಾಗಿದೆ. ನಿನ್ನ ನೆನಪಲ್ಲೇ ನೊಂದು ಬಸವಳಿದ ನನಗೆ ಆ ನೋವಿನ ಪರಿಯನ್ನು ಹೇಗೆ ಯಾರೊಂದಿಗೆ ವಿನಿಮಯಿಸಿಕೊಳ್ಳಲಿ .ನಮ್ಮಿಬ್ಬರಿಗೂ ಗೊತ್ತು ನೀ ಎಂದು ನನ್ನವನೇ ,ನಾ ಎಂದು ನಿನ್ನವಳೇ ಎಂದು ನಮ್ಮ ಪ್ರೀತಿಗೆ ಎಷ್ಟೇ ವರುಷಗಳಾದರೂ ಅದೊಂದು ಸರ್ವಕಾಲಿಕ ವಸಂತ.
ದೂರದಲ್ಲಿ ಇರುವುದರಿಂದ ನಮ್ಮಿಬ್ಬರ ಪ್ರೀತಿ ದೂರಾಗದು,ಆ ಮಧುರ ಪ್ರೀತಿಯು ವಿರಹ ವೇದನೆ ಸಹಿಸಲಾಗದೇ ನೀನು ಆಗಾಗ ಕರೆ ಮಾಡುತ್ತಿ ಎಂದು ನಂಬಿದ್ದೇನೆ,ಸುಡುವ ವಿರಹದಲ್ಲಿ ಬೆಂದು ಬೆಂಗಾಡಾದ ಹೃದಯಕ್ಕೆ ನಿನ್ನ ಪ್ರೀತಿಯ ಸೋನೆಯ ಸುರಿಸಿ ಬದುಕನ್ನು ಹಚ್ಚ ಹಸಿರನ್ನಾಗಿಸು,ನನ್ನ ಈ ಪವಿತ್ರ ಪ್ರೇಮ ಸುಧೆಯು ಎಂದೆಂದು ನಿನಗಾಗಿಯೇ “ಧರೆಯು ಮುಂಗಾರು ಮಳೆಯ ಮನ್ವಂತರ” ಕೆ ಕಾಯುವ ಮೊದಲ ಮಳೆಯಂತೆ ಕಾಯುತ್ತಿರುತ್ತೇನೆ ನಿನಗಾಗಿ….
ಮಾನಸಾ ಎಪಿ
 10 feb 2017
 

ಕ್ರೂರ ವಿಧಿ

ಓ ವಿಧಿಯೆ ಯಾಕಿಷ್ಟು ನೀ ಕ್ರೂರ

ಅರಳಿ ಮುಡಿ ಏರುವ ಹೂವನ್ನು

ನಲುಗಿಸಿ ಹೊಸಕಿ ಹಾಕಿದೆ ಕಾಮನೆ

ಕಾಣದಾಯಿತೆ ಹೆಣ್ಣಿನ ಮನದ ವೇದನೆ
ಅದೆಷ್ಟೋ ಹೊಂಗನಸುಗಳ ಹೊತ್ತ ಜೀವ

ಕನಸುಗಳೆಲ್ಲ ಕರಗಿ ಕಮರಿ ಹೋದ ಭಾವ

ಮುಗ್ದ ಮನಸ್ಸಿನ ಆಕ್ರಂದನ ಕೇಳುವರಾರಿಲ್ಲ

ಬಣ್ಣ ಬಣ್ಣದ ಬದುಕು ಮಾಸಿಹೋಯಿತಲ್ಲ
ಅಮ್ಮ,ಅಕ್ಕ,ಮಡದಿ ಮಗಳಾಗಿ ಬಾಳಿ

ಸದಾ ನಗಿಸಿ ನಗುವ ಹಂಚುವಳು ಅರಳಿ

ನೋವ ನುಂಗಿ,ಬಾಳ ಬೆಳಕಾಗಿ ನಗುತಲಿ

ಜೊತೆ ಇರುವಳು ಒಲವ ದೀಪ ಬೆಳಗುತಲಿ
ಕವಿದಿಹುದು ಮನದಲಿ ಕ್ರೂರ ಮಬ್ಬು

ಮೃಗಗಳ ಹಿಡಿತಕ್ಕೆ ಸಿಕ್ಕು ಕತ್ತಲಾಗಿಸಿದೆ ಬದುಕು

ಮತ್ತೇರಿ ಅಟ್ಟಹಾಸದಲಿ ಮೆರೆಯುತ್ತಿವೆ ಮನಗಳು

ವಿಕೃತ ಮನಸ್ಸುಗಳಿಗೆ ಬಲಿಯಾಗುತಿವೆ ಮುಗ್ದ ಕಂದಮ್ಮಗಳು

ಏನು ಅರಿಯದ ಮನಕ್ಕೇಕೆ ಈ ಪರಿ ಪರೀಕ್ಷೆ

ಎಂದಾಗುವದು ಪಾಪಿಗಳಿಗೆ ಕಠಿಣ ಶಿಕ್ಷೆ

ಮತ್ತೆ ಮರುಕಳಿಸಿತೆ *ನಿರ್ಭಯ*ಳ ನೆನಪ

ಹೆಣ್ಣಾಗಿ ಹುಟ್ಟಿದ್ದಕ್ಕೆ ಇದು ತೀರದ ಶಾಪ

ಮಾನಸಾ ಎಪಿ

ಸಮ್ಮೋಹನ

ಗೆಳೆಯಾ…

ನೀ ನೀಡಿದ 

ಮಧುರ ಚುಂಬನಕೆ 

ಮನದಲಿ 

ನೂರೊಂದು 

ಕಂಪನ..!

ನಸು ನಾಚಿದ 

ನಯನದಲಿ 

ಪ್ರೀತಿಯ

ಸಮ್ಮೋಹನ..! 

ಲಜ್ಜೆಯಲಿ

ಅರಳಿದ 

ವದನದಲಿ 

ರಂಗೇರಿದ

ಒಲವಿನ ಸಿಂಚನ..!!!
#ಮಾನಸಾ #ಎಪಿ*